ಮುಸ್ಸೋಲಿನಿ, ಬೆನಿಟೋ
1883-1945. ಫ್ಯಾಸಿಸ್ಟ್ ಸಿದ್ಧಾಂತದ ಸ್ಥಾಪಕ. ಇಟಲಿಯನ್ನು ಸುಮಾರು 21 ವರ್ಷಗಳ ಕಾಲ ಆಳಿದ ಸರ್ವಾಧಿಕಾರಿ. 1883 ಜುಲೈ 29ರಂದು ಇಟಲಿಯ ಡೊವಿಯ ಎಂಬಲ್ಲಿ ಜನಿಸಿದ. ತಾಯಿ ಶಾಲಾ ಉಪಾಧ್ಯಾಯಿನಿ, ತಂದೆ ಕಮ್ಮಾರ. ಪ್ರಿಡಪ್ಪಿಯೋ ಎಂಬಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಅನಂತರ ಈತನನ್ನು ಹದಿನಾಲ್ಕನೆಯ ವರ್ಷದಲ್ಲಿ ಫಯೆಂಜಾ ಎಂಬಲ್ಲಿ ಕ್ರೈಸ್ತ ಭಿಕ್ಷುಗಳು ನಡೆಸುತ್ತಿದ್ದ ಶಾಲೆಯೊಂದಕ್ಕೆ ಸೇರಿಸಲಾಯಿತು. ಶಾಲೆಯ ಕಟ್ಟುನಿಟ್ಟಿನ ಶಿಸ್ತನ್ನು ವಿರೋಧಿಸಿ ಬಂಡಾಯವೆದ್ದ. ಇವನನ್ನು ದುರ್ನಡತೆಗಾಗಿ ಅಲ್ಲಿಂದ ಹೊರೆದೂಡಲಾಯಿತು. ತರುವಾಯ ಫೋರ್ಲಿ ಎಂಬಲ್ಲಿದ್ದ ಸಾಮಾನ್ಯ ಶಾಲೆಯೊಂದರಲ್ಲಿ ವ್ಯಾಸಂಗ ನಡೆಸಿದ. ಸ್ವಲ್ಪಕಾಲ ಅಲ್ಲಿ ಕೆಲಸ ಮಾಡಿದ; ಅಲ್ಲಿದ್ದಾಗ ತನ್ನ ಪುಂಡಾಟಿಕೆಯಿಂದಾಗಿ ಮೇಲಿಂದ ಮೇಲೆ ಅಲ್ಲಿಯ ಪೋಲೀಸರೊಡನೆ ಘರ್ಷಣೆಗಿಳಿದ. 1904ರಲ್ಲಿ ಇಟಲಿಗೆ ಹಿಂತಿರುಗಿ ಅಗತ್ಯವಾಗಿ ಪೂರೈಸಬೇಕಿದ್ದ ಸೈನಿಕ ಸೇವೆಗೆ ಸೇರಿದ. 1907-08ರಲ್ಲಿ ಮತ್ತೆ ಶಿಕ್ಷಕನಾದ. 

1909ರಲ್ಲಿ ಆಸ್ಟ್ರಿಯದ ಟ್ರೆಂಟ್‍ಗೆ (ಈಗ ಇಟಲಿಗೆ ಸೇರಿದೆ) ತೆರಳಿ ಅಲ್ಲಿಯ ಸಮಾಜ ಸ್ವಾಮ್ಯವಾದ (ಸೋಷಿಯಲಿಸ್ಟ್) ಪತ್ರಿಕೆಯೊಂದರಲ್ಲಿ ಸ್ವಲ್ಪಕಾಲ ಕೆಲಸ ಮಾಡಿದ. ಈಕಾಲದಲ್ಲಿ ಕೆಲವುಸಾಹಿತ್ಯ ಕೃತಿಗಳನ್ನು ರಚಿಸಿದ. ಟ್ರೆಂಟ್ ಬಗ್ಗೆ ಇಟಲಿಗೆ ಇದ್ದ ಹಕ್ಕನ್ನು ಬಹಿರಂಗವಾಗಿ ಬೆಂಬಲಿಸಿದ್ದರಿಂದ ಈತನನ್ನು ಆಸ್ಟ್ರಿಯದಿಂದ ಗಡೀಪಾರು ಮಾಡಲಾಯಿತು. ಇಟಲಿಗೆ ಹಿಂತಿರುಗಿದ ತರುವಾಯ ಸಮಾಜ ಸ್ವಾಮ್ಯಪತ್ರಿಕೆಯ ಸಂಪಾದಕನಾದ ಅನಂತರ ಇಟಲಿಯ ಪ್ರಮುಖ ಪತ್ರಿಕೆ ಎನಿಸಿದ ಅವಂಟಿಯದ ಸಂಪಾದಕನಾದ (1912). ಒಂದನೆಯ ಮಹಾಯುದ್ಧ ಆರಂಭವಾದಾಗ ಇಟಲಿ ತಕ್ಷಣವೇ ಜರ್ಮನಿಯ ವಿರುದ್ಧ ಸಮರ ಸಾರಬೇಕೆಂದು ಈತ ಪ್ರಬಲವಾಗಿ ಪ್ರತಿಪಾದಿಸಿದುದರಿಂದ ಸಮಾಜಸ್ವಾಮ್ಯವಾದಿ ಪಕ್ಷದ ಮುಖಂಡರ ಕೋಪಕ್ಕೆ ಗುರಿಯಾದ; ಪರಿಣಾಮವಾಗಿ 1914ರ ನವೆಂಬರ್ 25 ರಂದು ಈತನನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ಕೂಡಲೇ ಇಲ್ ಪೊಪೊಲೊಡಿ ಇಟಾಲಿಯಾ ಎಂಬ ತನ್ನದೇ ಆದ ಪತ್ರಿಕೆಯೊಂದನ್ನು ಹೊರಡಿಸಿ ಇಟಲಿ ಯುದ್ಧ ನಿರತವಾಗಬೇಕೆಂದು ಸಾರುವ ಉದ್ದೀಪಕ ಸಂಪಾದಕೀಯಗಳನ್ನು ಬರೆದ. ಇಟಲಿ ಯುದ್ಧಕ್ಕೆ ಪ್ರವೇಶಿಸಿದಾಗ ಸೈನ್ಯದ ಪಟ್ಟಿಯಲ್ಲಿ ಮುಸ್ಸೋಲಿನಿಯ ಹೆಸರು ಸೇರಿ ಆತ ಕಾರ್ಪೊರಲ್ ಆಗಿ ಸಕ್ರಿಯವಾಗಿ ಭಾಗವಹಿಸಿದ (1915 ಸೆಪ್ಟೆಂಬರ್‍ನಿಂದ 1917 ಫೆಬ್ರುವರಿ).

ಈತ ಫ್ಯಾಸಿಸ್ಟ್ ಎಂದು ಕರೆಯಲಾದ ಮೊದಲ ರಾಜಕೀಯ ಸಂಘವನ್ನು ಮಿಲಾನ್‍ನಲ್ಲಿ ಸ್ಥಾಪಿಸಿದ (1919). ಮೊದಮೊದಲು ಅದರ ಕಾರ್ಯಕ್ರಮ ಪ್ರಧಾನವಾಗಿ ರಾಷ್ಟ್ರೀಯ ಸ್ವರೂಪದ್ದಾಗಿದ್ದು ಅತೃಪ್ತ ಯುದ್ಧವೀರರಿಗೆ ಮನವಿ ಮಾಡಿಕೊಳ್ಳುವುದಾಗಿತ್ತು. ಪ್ರಾಚೀನ ರೋಮ್ ಸಾಮ್ರಾಜ್ಯದ ವೈಭವ ಪುನರ್ ಸ್ಥಾಪನೆಯನ್ನು ಪ್ರತಿಪಾದಿಸಿ ಇಟಲಿಯ ಜನತೆಗೆ ಮುಸ್ಸೋಲಿನಿ ಕರೆನೀಡಿದ. ತರುವಾಯ ಈ ಕಾರಣಕ್ಕೆ ಶ್ರೀಮಂತ ಇಟಾಲಿಯನ್ನರ ಮನಗೆಲ್ಲಲು ಕಾರ್ಯತಂತ್ರವನ್ನು ರೂಪಿಸಿದ. 1922ರ ಅಕ್ಟೋಬರ್ ವೇಳೆಗೆ ಫ್ಯಾಸಿಸ್ಟ್‍ಪಾರ್ಟಿ ಬಲವಾಗಿ ಬೇರೂರಿ ದುರ್ಬಲನಾದ ಮೂರನೆಯ ವಿಕ್ಟರ್ ಇಮ್ಯಾನ್ಯುಯೆಲ್ ಸರ್ಕಾರದ ನೇತೃತ್ವವನ್ನು ವಹಿಸಲು ಮುಸ್ಸೋಲಿಗೆ ಆಹ್ವಾನ ನೀಡಬೇಕಾದ ಸನ್ನಿವೇಶ ಏರ್ಪಟ್ಟಿತು. 

	1935-36ರಲ್ಲಿ ಮುಸ್ಸೋಲಿನಿ ಇಥಿಯೋಪಿಯಾವನ್ನು ಆಕ್ರಮಿಸಿ ವಶಪಡಿಸಿ ಕೊಂಡ. ಇನ್ನೂ ಬಿಲ್ಲುಬಾಣ ಬಳಕೆಯ ಯುಗದಲ್ಲೇ ಇದ್ದ ಶಾಂತಸ್ವಭಾವದ ಆ ಜನರನ್ನು ಮೆಷಿನ್‍ಗನ್‍ಧಾರಿಗಳಾದ ಇಟಲಿಯ ಸೈನಿಕರು ಸುಲಭವಾಗಿ ನುಚ್ಚುನೂರು ಮಾಡಿದರು. ಸ್ಪೇನ್ ದೇಶದಲ್ಲಿ ಬಂಡಾಯ ಸಂಭವಿಸಿದಾಗ ಮುಸ್ಸೋಲಿನಿ ಮತ್ತು ಅಡಾಲ್ಫ್ ಹಿಟ್ಲರ್ ಬಂಡಾಯದ ನೇತಾರ ಜನರಲ್ ಫ್ರಾನ್ಸಿಸ್ಕೊ ಫ್ರಾಂಕೊನನ್ನು ಬೆಂಬಲಿಸಲು ನಿರ್ಧರಿಸಿ, ಆತನ ನೆರವಿಗೆ ಸೈನ್ಯ ಕಳುಹಿಸಿಕೊಟ್ಟರು (1936).

	1940ರಲ್ಲಿ ಬಹಳಮಟ್ಟಿಗೆ ಫ್ರಾನ್ಸನ್ನು ಜರ್ಮನಿ ಜಯಿಸಿದ ತರುವಾಯ ಈತ ಎರಡನೆಯ ಮಹಾಯುದ್ಧದ ರಂಗಕ್ಕೆ ಪ್ರವೇಶಿಸಿ ದಕ್ಷಿಣದ ಫ್ರಾನ್ಸ್‍ನ್ನು ಆಕ್ರಮಿಸಿದ. ಕೆಲವು ದಿನಗಳಲ್ಲೇ ಫ್ರಾನ್ಸ್ ಶರಣಾಯಿತಾದರೂ ಬೇರೆಡೆಗಳಲ್ಲಿ ಇಟಲಿಯ ಸೈನ್ಯಕ್ಕೆ ಒಂದರ ಮೇಲೊಂದರಂತೆ ವಿಪತ್ತುಗಳುಂಟಾಗಿ ಪರಿಸ್ಥಿತಿ ಗಂಭೀರವಾಯಿತು. ಆಫ್ರಿಕ, ಗ್ರೀಸ್ ಮತ್ತು ಕೊನೆಗೆ ಇಟಲಿಯಲ್ಲಿಯೇ ಮುಸ್ಸೋಲಿನಿಯ ಸೈನ್ಯಕ್ಕೆ ಸೋಲುಂಟಾಯಿತು. ಇಟಲಿಯ ಸಂಪೂರ್ಣನಾಶವನ್ನು ಸ್ವಲ್ಪಕಾಲ ತಡೆಹಿಡಿಯುವುದು ಜರ್ಮನಿಗೆ ಸಾಧ್ಯವಾಯಿತು. ಮುಸ್ಸೋಲಿನಿಯ ಕಾರ್ಯ ಫಲಪ್ರದವಾಗಲಿಲ್ಲ. 1943ರ ಜುಲೈನಲ್ಲಿ ಫ್ಯಾಸಿಸ್ಟ್ ಗ್ರ್ಯಾಂಡ್ ಕೌನ್ಸಿಲ್ ಮುಸ್ಸೋಲಿನಿಯ ವಿರುದ್ಧವಾಗಿ, ಈತ ರಕ್ಷಣೆಗೆ ಧಾವಿಸಿತು. ಆಗ ಈತ ಉತ್ತರ ಇಟಲಿಯ ದುರ್ಬಲ ಸರ್ಕಾರದ ನೇತಾರನಾದ. 

	1945ರ ವಸಂತಕಾಲದಲ್ಲಿ ಉತ್ತರ ಇಟಲಿಯಲ್ಲಿ ಜರ್ಮನ್ ಸೈನ್ಯಕ್ಕೆ ಸೋಲುಂಟಾಯಿತು. ಮುಸ್ಸೋಲಿನಿ ತನ್ನ ಪತ್ನಿ ಕ್ಲಾರಾ ಮತ್ತಿತರ ಕೆಲವು ಅನುಯಾಯಿಗಳೊಡನೆ ಉತ್ತರದತ್ತ ಪಲಾಯನ ಮಾಡಿದ. ಆದರೆ ಲೇಕ್ ಕಾಮೊ ಎಂಬಲ್ಲಿ ಇಟಲಿಯ ಗೂಢಚಾರರ ಕೈಗೆ ಸಿಕ್ಕಿಬಿದ್ದ; ಪತಿಪತ್ನಿಯರಿಬ್ಬರೂ ಗುಂಡೇಟಿಗೆ ಬಲಿಯಾದರು. ಅವರ ಕಳೇಬರಗಳನ್ನು ಮಿಲಾನ್‍ಗೆ ಕೊಂಡೊಯ್ದು ಗ್ಯಾರೇಜೊಂದರ ಬಳಿ ತೂಗುಹಾಕಲಾಯಿತು. ಆದರೆ ಮುಸ್ಸೋಲಿನಿ ಅನುಚರರ ಪ್ರದರ್ಶನವನ್ನು ತಡೆಯಲು ಶವಗಳನ್ನು ರಹಸ್ಯವಾಗಿರಿಸಬೇಕಾಯಿತು. 1957ರ ಆಗಸ್ಟ್‍ನಲ್ಲಿ ಇವನ ಇನ್ನೊಬ್ಬ ಪತ್ನಿಯ ಕೋರಿಕೆಯಂತೆ ಮುಸ್ಸೋಲಿನಿಯ ದೇಹವನ್ನು ಪ್ರಿಡಾಪ್ಪಿಯೊ ಎಂಬಲ್ಲಿ ಸಮಾಧಿ ಮಾಡಲಾಯಿತು. 

	ಇಟಲಿಯನ್ನು ಒಂದು ಮಹಾಸಾಮ್ರಾಜ್ಯವಾಗಿ ಬೆಳೆಸಲು ಮುಸ್ಸೋಲಿನಿ ಮಾಡಿದ ಪ್ರಯತ್ನ ಸಫಲವಾಗಲಿಲ್ಲ. ಈತ ತನ್ನ ಅಧಿಕಾರವಧಿಯಲ್ಲಿ ನಿರುದ್ಯೋಗ ಪ್ರಮಾಣವನ್ನು ತಗ್ಗಿಸಿದ ಮತ್ತು ರೈಲ್ವೆ ಸೇವೆಯಲ್ಲಿ ಸುಧಾರಣೆಗಲನ್ನು ಜಾರಿಗೆ ತಂದ ಆದರೆ ಸುಧಾರಣೆಗಳಿಂದ ಸಾಮಾನ್ಯಜನ ದಾಸ್ಯಕ್ಕೊಳಗಾಗಿ ತಮ್ಮ ಸ್ವಾತಂತ್ರ್ಯವನ್ನೇ ಬಿಟ್ಟುಕೊಡಬೇಕಾಯಿತು. ಕೊಲೆ, ಗಡೀಪಾರು, ಖೈದಿಶಿಬಿರ ಮುಂತಾದ ಕ್ರೂರ ವಿಧಾನಗಳಿಂದ ಜನತೆಯ ಮೇಲೆ ಹಿಡಿತ ಸಾಧಿಸಿ ತನ್ನ ಶೌರ್ಯ ಸಾಹಸಗಳನ್ನು ಮೆರೆದ ಬಲವಂತನೀತ. ಇಟಲಿಯ ಪುರುಷರೆಲ್ಲ ಸೈನಿಕರೂ ಸ್ತ್ರೀಯರೆಲ್ಲ ಸೈನಿಕರ ತಾಯಂದಿರೂ ಆಗಿರಬೇಕೆನ್ನುವುದು ಈತನ ಕನಸಾಗಿತ್ತು. ಮುಸ್ಸೋಲಿನಿ ತನ್ನ ಪ್ರಜೆಗಳಿಂದ ಡ್ಯೂಸ್ ಡ್ಯೂಸ್ (ನಾಯಕ) ಎಂಬ ಘೋಷಣೆಯನ್ನೇ ಕೇಳಲು ತವಕಿಸುತ್ತಿದ್ದ. (ನೋಡಿ- ಇಟಲಿಯ-ಇತಿಹಾಸ)
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ